ನರಸಿಂಗರಾಯ -
ಎ ಕಿಸಂವಾರ್ ಗ್ಲಾಸರಿ ಆಫ್ ಕೆನರೀಸ್ ವಡ್ರ್ಸ್ ಎಂಬ ನಿಘಂಟನ್ನು ಸಂಕಲಿಸಿದವ. ಈತನ ಸ್ವಂತ ವಿಷಯಗಳು ಹೆಚ್ಚು ತಿಳಿದು ಬಂದಿಲ್ಲ. ಈತ ಮಂಗಳೂರು ಪ್ರಾಂತದವನೆಂದೂ ಬ್ರಾಹ್ಮಣ ಮತಸ್ಥನೆಂದೂ ಕವಿಚರಿತೆಕಾರರು ಹೇಳಿದ್ದಾರೆ. ಈತ ತನ್ನ ನಿಘಂಟನ್ನು ಜೇಮ್ಸ್ ವಿಲಿಯಂ ಬೆಸ್ಟ್ ಎಂಬುವರಿಗೆ ಅಂಕಿತ ಮಾಡಿದ್ದಾನೆ.

	ಇದು ಎಲ್ಲ ಶಬ್ದಗಳ ಅಕಾರಾದಿ ಇರುವ ನಿಘಂಟಲ್ಲ. ಇಲ್ಲಿ ಶಬ್ದಗಳನ್ನು ವಿಷಯಗಳಾಗಿ ವಿಂಗಡಿಸಿಕೊಂಡು ಆಯಾ ವಿಷಯಕ್ಕೆ ಸಂಬಂಧಿಸಿದ ಶಬ್ದಗಳನ್ನು ಅಕಾರಾದಿಯಾಗಿ ಕೊಟ್ಟಿದೆ. ಉದಾಹರಣೆಗೆ ಕೃಷಿ, ಅಂಗರಚನಾಶಾಸ್ತ್ರ, ಮರಗೆಲಸ, ಜ್ಯೋತಿಷ- ಹೀಗೆ ವಿಷಯಗಳನ್ನು ವಿಂಗಡಿಸಿಕೊಂಡು ಆಯಾ ವಿಷಯಕ್ಕೆ ಸಂಬಂಧಪಟ್ಟ ಪದಗಳನ್ನು ಅಕಾರಾದಿಯಾಗಿ ಕೊಡಲಾಗಿದೆ. ಈ ನಿಘಂಟಿನಲ್ಲಿ ಸುಮಾರು ಐದುಸಾವಿರ ದೇಶ್ಯ ಅನ್ಯದೇಶ್ಯ ಶಬ್ದಗಳಿವೆ; ಕನ್ನಡ ಪ್ರಾದೇಶಿಕ ಶಬ್ದಗಳು ನುಡಿಗಟ್ಟುಗಳೂ ಸೇರಿವೆ. ದಿನನಿತ್ಯದ ಬಳಕೆಯ ಮತ್ತು ಆಡಳಿತದಲ್ಲಿ ಚಾಲ್ತಿಯಲ್ಲಿರುವ ಶಬ್ದಗಳ ಅರ್ಥಗಳನ್ನೂ ಅವುಗಳ ವಿವರಣೆಯನ್ನೂ ಇಂಗ್ಲಿಷಿನಲ್ಲಿ ನೀಡಲಾಗಿದೆ. ಈ ಶಬ್ದಗಳಿಗಿರುವ ವಿವಿಧ ಅರ್ಥಗಳನ್ನು ಪ್ರತ್ಯೇಕ ಸಂಖ್ಯೆಗಳ ಮೂಲಕ ನಿರ್ದೇಶಿಸಲಾಗಿದೆ. ಗ್ರಂಥಸ್ಥವಾಗದ ರೂಢಿಯಲ್ಲಿರುವ ಪ್ರಾದೇಶಿಕ ವ್ಯಾವಹಾರಿಕವಾದ ಅನೇಕ ಶಬ್ದಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ವಿಶೇಷವಾಗಿ ಇದು ವಿದ್ಯಾರ್ಥಿಗಳಿಗೂ ಜನಸಾಮಾನ್ಯರಿಗೂ ಆಡಳಿತಗಾರರಿಗೂ ತುಂಬ ಉಪಯುಕ್ತವಾದ ನಿಘಂಟು.
(ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ